ಬ್ರಿಟಿಷ್ ಭಾರತ ಸರ್ಕಾರಕ್ಕೂ ಗೂರ್ಖರಿಗೂ ನಡುವೆ 1814 ರಿಂದ 1816 ರವರೆಗೆ ನಡೆದ ಯುದ್ಧ. 1426ರಲ್ಲಿ ನೇಪಾಲದ ರಾಜನಾದ ಯಕ್ಷಮಲ್ಲ ಸುಮಾರು 50 ವರ್ಷಗಳ ಕಾಲ ಆಳಿ ತನ್ನ ಸಾವಿಗೆ ಮುಂಚೆ ರಾಜ್ಯವನ್ನು ತನ್ನ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಹಂಚಿಕೊಟ್ಟ. ಇದರಿಂದ ನೇಪಾಲ ಕಾಠಮಂಡು ಮತ್ತು ಬಾತ್ಗಾನ್ ಎಂಬ ಎರಡು ಸಣ್ಣ ಪ್ರತಿಸ್ಪರ್ಧಿ ಸಂಸ್ಥಾನಗಳಾಗಿ ಒಡೆಯಿತು. 1708ರಲ್ಲಿ ಹಿಮಾಲಯ ಪರ್ವತ ಪ್ರದೇಶದಲ್ಲಿದ್ದ ಒಂದು ಬಣವಾಗಿದ್ದ ಗೂರ್ಖರು ಈ ಎರಡು ರಾಜ್ಯಗಳ ಒಳಜಗಳವನ್ನು ಉಪಯೋಗಿಸಿಕೊಂಡು ನೇಪಾಲವನ್ನು ಆಕ್ರಮಿಸಿದರು. ಅವರು ಕ್ರಮೇಣ ನೇಪಾಲವನ್ನು ಸೈನಿಕ ಶಕ್ತಿಯುಳ್ಳ ಒಂದು ಪ್ರಬಲ ರಾಜ್ಯವನ್ನಾಗಿ ಮಾಡಿ ರಾಜ್ಯ ವಿಸ್ತರಣೆಗೆ ಹೊರಟರು. ಉತ್ತರ ದಿಕ್ಕಿನಲ್ಲಿ ಚೀನೀ ಸಾಮ್ರಾಜ್ಯವಿದ್ದುದರಿಂದ ಆ ದಿಕ್ಕಿನಲ್ಲಿ ವಿಸ್ತರಣೆಗೆ ಅವಕಾಶವಾಗಲಿಲ್ಲ. ಆದರೆ ದಕ್ಷಿಣದ ಕಡೆಗೆ ತಿರುಗಿ, 19ನೆಯ ಶತಮಾನದ ಪ್ರಾರಂಭದಲ್ಲಿ ಪೂರ್ವಕ್ಕೆ ತಿಸ್ತಾ ಮತ್ತು ಪಶ್ಚಿಮಕ್ಕೆ ಸಟ್ಲೆಜ್ವರೆಗೂ ಆಕ್ರಮಿಸಿಕೊಂಡರು. 1801ರಲ್ಲಿ ಈಸ್ಟ್‌ ಇಂಡಿಯಾ ಕಂಪನಿ ಈಗಿನ ಉತ್ತರ ಪ್ರದೇಶದ ಗೊರಖ್ಪುರ ಜಿಲ್ಲೆಯನ್ನು ಆಕ್ರಮಿಸಿತು. ಇದರಿಂದ ನೇಪಾಲ ಮತ್ತು ಬ್ರಿಟಿಷ್ ಭಾರತ ನೆರೆ ದೇಶಗಳಾದವು. ಗೂರ್ಖರು ಪದೇ ಪದೇ ಆಕ್ರಮಣ ನಡೆಸಲು ಪ್ರಾರಂಭಿಸಿದರು. ನೇಪಾಲ ಮತ್ತು ಗೋರಖ್ಪುರಗಳ ನಡುವಣ ಗಡಿಯನ್ನು ಗುರುತಿಸಿರಲಿಲ್ಲ. 1805ರ ಅಕ್ಟೋಬರಿನಲ್ಲಿ ಭಾರತದ ಗವರ್ನರ್-ಜನರಲ್ ಜಾರ್ಜ್ ಬಾರ್ಲೊ ಗೂರ್ಖರಿಗೆ ಎಚ್ಚರಿಕೆ ನೀಡಿದ. ಲಾರ್ಡ್ ಮಿಂಟೊ ಗವರ್ನರ್-ಜನರಲ್ ಆಗಿದ್ದಾಗ ಗೂರ್ಖರು ಬುತ್ತಾಲ್ ಮತ್ತು ಶಿಯೋಜ್ಗಳನ್ನು ಆಕ್ರಮಿಸಿದರು. ಆದರೆ ಇಂಗ್ಲಿಷರು ಬಹಿರಂಗ ಘರ್ಷಣೆ ಇಲ್ಲದೆ ಪುನಃ ಅವುಗಳನ್ನು ವಶಪಡಿಸಿಕೊಂಡರು.

1814ರ ಮೇಯಲ್ಲಿ ಗೂರ್ಖರು ಬುತ್ವಾಲಿನಲ್ಲಿ ಮೂರು ಪೋಲಿಸ್ ಠಾಣೆಗಳ ಮೇಲೆ ಆಕ್ರಮಣ ನಡೆಸಿದರು. ಅಕ್ಟೋಬರ್ 1814ರಲ್ಲಿ ಭಾರತದ ಗವರ್ನರ್ ಜನರಲ್ ಲಾರ್ಡ್ ಹೇಸ್ಟಿಂಗ್ಸ್‌ ಯುದ್ಧ ಘೋಷಿಸಿದ. ಗೂರ್ಖರ ವಿರುದ್ಧ ನಾಲ್ಕು ಸ್ಥಳಗಳಲ್ಲಿ ಇಂಗ್ಲಿಷರ ಕಾರ್ಯಾಚರಣೆ ಪ್ರಾರಂಭವಾಯಿತು. ಗೂರ್ಖರು ಉತ್ತಮ ಸೈನಿಕರಾಗಿದ್ದರು. ಬ್ರಿಟಿಷ್ ಸೈನಿಕರಿಗೆ ಪರ್ವತ ಪ್ರದೇಶದ ಜ್ಞಾನ ಅಷ್ಟಾಗಿ ಇರಲಿಲ್ಲ. ಮೇಜರ್ ಜನರಲ್ ಮಾರ್ಲೆ ಮತ್ತು ಜಾನ್ ಸಲ್ಲಿವನ್ ವುಡ್ಡರ ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯ ಹಿಮ್ಮೆಟ್ಟಬೇಕಾಯಿತು. ಕಲಂಗ ಎಂಬ ಪರ್ವತ ಕೋಟೆಯ ಮುತ್ತಿಗೆಯಲ್ಲಿ ಜನರಲ್ ಜೆಲೆಸ್ಟಿ ಮರಣ ಹೊಂದಿದ. ಜೈತಕ್ ಎಂಬಲ್ಲಿ ಜನರಲ್ ಮಾರ್ಟಿಂಡೆಲ್ ಸೋತ. ಆದರೆ ಬ್ರಿಟಿಷ್ ಸೇನೆ 1815ರ ಏಪ್ರಿಲಿನಲ್ಲಿ ಆಲ್ಮೋರವನ್ನು ಆಕ್ರಮಿಸಿತು. 1815ರ ಮೇ ತಿಂಗಳಲ್ಲಿ ಜನರಲ್ ಆಕ್ಟರ್ ಲೋನಿ ಗೂರ್ಖರ ನಾಯಕ ಅಮರ್ಸಿಂಗ್ ಥಾಪನನ್ನು ಸೋಲಿಸಿ ಮಲಾನ್ ಕೋಟೆಯನ್ನು ವಶವಪಡಿಸಿಕೊಂಡ. 1815ರ ನವೆಂಬರ್ 28ರಂದು ಗೂರ್ಖರು ಸಗೌಲಿ ಒಪ್ಪಂದಕ್ಕೆ ಸಹಿ ಹಾಕಿದರು. ಆದರೆ ನೇಪಾಲ ಸರ್ಕಾರ ಈ ಒಪ್ಪಂದಕ್ಕೆ ಅಂಗೀಕಾರ ನೀಡದಿರಲು ಪುನಃ ಯುದ್ಧ ಕಾರ್ಯಾಚಾರಣೆ ಪ್ರಾರಂಭವಾಯಿತು. ಅಕ್ಬರ್ಲೋನಿ 1816ರ ಫೆಬ್ರುವರಿ 28ರಂದು ಪುಕ್ವನ್ಪುರ ಕದನದಲ್ಲಿ ಗೂರ್ಖರನ್ನು ಸೋಲಿಸಿ, ನೇಪಾಲದ ರಾಜಧಾನಿಯ ಸಮೀಪಕ್ಕೆ ಬಂದ. ನೇಪಾಲ ಸರ್ಕಾರ ಒಪ್ಪಂದವನ್ನು ಮಾರ್ಚ್ ತಿಂಗಳಲ್ಲಿ ಅಧಿಕೃತವಾಗಿ ಅಂಗೀಕರಿಸಿತು. ಈ ಒಪ್ಪಂದದ ಪ್ರಕಾರ ನೇಪಾಲ ತನ್ನ ದಕ್ಷಿಣಗಡಿಯ ತಗ್ಗು ಪ್ರದೇಶಗಳ ಹಕ್ಕನ್ನು ಬಿಟ್ಟುಕೊಟ್ಟಿತು. ಇಂಗ್ಲೀಷರಿಗೆ ನೇಪಾಲದ ಪಶ್ಚಿಮದಲ್ಲಿ ಗರ್ವಾಲ್ ಮತ್ತು ಕುಮನ್ ಜಿಲ್ಲೆಗಳನ್ನು ಕೊಟ್ಟಿತು. ಗೂರ್ಖರು ಸಿಕ್ಕಿಮ್ನಿಂದ ವಾಪಸಾದರು : ನೇಪಾಲದ ರಾಜಧಾನಿ ಕಾಠಮಂಡುವಿನಲ್ಲಿ ಒಬ್ಬ ಬ್ರಿಟಿಷ್ ರೆಸಿಡೆಂಟ್ ಇರಲು ಅವರು ಒಪ್ಪಿದರು. ಅನಂತರ ಗೂರ್ಖರು ಒಪ್ಪಂದದ ಪ್ರಕಾರ ನಡೆದುಕೊಂಡರಲ್ಲದೆ ಅವರಲ್ಲಿ ಅನೇಕರು ಬ್ರಿಟಿಷ್ ಭಾರತ ಸೇನೆಯನ್ನು ಸೇರಿ ನಿಷ್ಠೆಯಿಂದ ಸೇವೆ ಸಲ್ಲಿಸಿದರು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ